ಬೆನೆಡೆಟೋ ಕ್ರೋಚೆ :  -
1866-1952. ಇಟಲಿಯ ಪ್ರಸಿದ್ಧ ತತ್ತ್ವಶಾಸ್ತ್ರಜ್ಞ. ಇತಿಹಾಸಕಾರ, ಸಂಪಾದಕ, ವಿಮರ್ಶಕ ಮತ್ತು ರಾಜಕೀಯ ಧುರೀಣ. ಹುಟ್ಟಿದ್ದು ಪೆಸ್ಕಸ್ಸೆರೋಲಿಯಲ್ಲಿ. ಅಲ್ಲಿನ ಒಂದು ಕೆಥೊಲಿಕ್ ಪಾಠಶಾಲೆಯಲ್ಲಿ ಈತನ ವಿದ್ಯಾಭ್ಯಾಸ ನಡೆಯಿತು. 1883ರಲ್ಲಿ ಆದ ಭೂಕಂಪಕ್ಕೆ ಸಿಕ್ಕಿ ಈತನ ತಾಯಿತಂದೆ ಮೃತರಾದರು. ಅನಂತರ ಈತ ತನ್ನ ತಂದೆಯ ಸೋದರ ಸಿಲ್ವೋಸ್ಪಾವೆಂಟನ ಆಶ್ರಯದಲ್ಲಿ ರೋಮಿನಲ್ಲಿ ನೆಲೆಸಿದ. ರೋಮ್ ವಿಶ್ವವಿದ್ಯಾಲಯದಲ್ಲಿ ಕೆಲವು ಕಾಲ ವ್ಯಾಸಂಗ ನಡೆಸಿದ ಮೇಲೆ, ವ್ಯಾಸಂಗವನ್ನು ಮುಂದುವರಿಸಲಾಗದೆ 1886ರಲ್ಲಿ ನೇಪಲ್ಸ್‍ಗೆ ಹೋದ. ಅಲ್ಲಿ ನೇಪಲ್ಸ್‍ಗೆ ಸಂಬಂಧಪಟ್ಟ ಚರಿತ್ರೆಯ ಸಂಶೋಧನೆಯಲ್ಲಿ ಮಗ್ನನಾದ. ಚರಿತ್ರೆಯ ಸ್ವಭಾವ(1893) ಮತ್ತು ಸಾಹಿತ್ಯ ವಿಮರ್ಶೆಯ ವಿಧಾನ(1895) ಎಂಬ ಪ್ರಬಂಧಗಳನ್ನು ಪ್ರಕಟಿಸಿದ. 1896ರಿಂದ 1900ರ ವರೆಗೆ ಮಾಕ್ರ್ಸ್ ಸಿದ್ದಾಂತವನ್ನು ಕುರಿತು ಹಲವು ಪ್ರಬಂಧಗಳನ್ನು ಬರೆದ. 1902ರ ಅನಂತರ ತನ್ನ ತಾತ್ತ್ವಿಕ ಸಿದ್ಧಾಂತವನ್ನು ಫಿಲೊಸೊಫಿಯ ಡೆಲ್ಲೊ ಸ್ಪಿರಿಟೊ ಎಂಬ ಹೆಸರಿನಲ್ಲಿ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದ; ಈಸ್ತೆಟಿಕ್ ಆಸ್ ಸೈನ್ಸ್ ಆಫ್ ಎಕ್ಸ್‍ಪ್ರೆಷನ್ ಅಂಡ್ ಜನರಲ್ ಲಿಂಗಿಸ್ಟಿಕ್ಸ್, ಲಾಜಿಕ್ ಆಸ್ ದಿ ಸೈನ್ಸ್ ಆಫ್ ಪ್ಯೂರ್ ಕಾನ್ಸೆಪ್ಟ್; ಫಿಲಾಸಫಿ ಆಫ್ ದಿ ಪ್ರಾಕ್ಟಿಕಲ್; ಎಕನಾಮಿಕ್ ಅಂಡ್ ಎಥಿಕ್; ಥಿಯೊರಿ ಅಂಡ್ ಹಿಸ್ಟರಿ ಆಫ್ ಹಿಸ್ಟೊರಿಯೊಗ್ರಫಿ, ಈ ನಾಲ್ಕೂ ಇಂಗ್ಲಿಷಿಗೆ ಭಾಷಾಂತರಗೊಂಡಿವೆ. ಇವುಗಳಾದ ಮೇಲೆ ಹೆಗೆಲನ ತತ್ತ್ವದಲ್ಲಿ ಜೀವಂತವಾದದ್ದು ಯಾವುದು ನಿಸ್ತೇಜನವಾದದ್ದು ಯಾವುದು ಎಂಬುದನ್ನು ಕುರಿತು ಒಂದು ಗ್ರಂಥವನ್ನು ಬರೆದ. ಇವಲ್ಲದೆ ಸಾಹಿತ್ಯ ವಿಮರ್ಶೆಗೆ ಸಂಬಂಧಪಟ್ಟಂತೆ ಈತ ಅನೇಕ ಗ್ರಂಥಗಳನ್ನು ಬರೆದಿದ್ದಾನೆ.

ಕ್ರೋಚೆ 1903ರಲ್ಲಿ ಲಾ ಕ್ರಿಟಿಕ ಎಂಬ ನಿಯತಕಾಲಿಕ ಪತ್ರಿಕೆಯನ್ನು ಪ್ರಾರಂಭಿಸಿ ನಲವತ್ತೊಂದು ವರ್ಷಗಳ ಕಾಲ ಅದನ್ನು ನಡೆಸಿದ. ಈ ಪತ್ರಿಕೆಯಲ್ಲಿಯೇ ಇವನ ಗ್ರಂಥಗಳು ಭಾಗ ಭಾಗವಾಗಿ ಪ್ರಕಟವಾದುವು. ಅಲ್ಲದೆ ಆ ಕಾಲದಲ್ಲಿ ಪ್ರಕಟವಾದ ಮುಖ್ಯ ತಾತ್ತ್ವಿಕ ಮತ್ತು ಸಾಹಿತ್ಯ ಗ್ರಂಥಗಳನ್ನು ಈತ ತನ್ನ ಪತ್ರಿಕೆಯಲ್ಲಿ ವಿಮರ್ಶಿಸಿದ. 1945ರಿಂದ ತನ್ನ ಅಂತ್ಯಕಾಲದ ವರೆಗೆ ಕ್ವಾಡೆರ್ನಿಡೆಲ್ಲ ಕ್ರಿಟಕದ ಇಪ್ಪತ್ತು ಸಂಪುಟಗಳನ್ನು ಹೊರ ಹಾಕಿದ. ಚರಿತ್ರೆ, ಸಾಹಿತ್ಯ ಮತ್ತು ರಾಜಕೀಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಬಂಧಗಳನ್ನು ಕ್ರೋಚೆ ಬರೆದ. ಅವುಗಳಲ್ಲಿ ಇಟಲಿಯ ಸಂಸ್ಕøತಿಯ ಮೇಲೆ ಬೆಳಕು ಚೆಲ್ಲುವ ಚಾರಿತ್ರಿಕ ಹಾಗೂ ವಿಮರ್ಶಾತ್ಮಕ ಲೇಖನಗಳು ಹೆಚ್ಚು ಮಹತ್ವಪೂರ್ಣವೆನಿಸಿವೆ.

ಈತ ತತ್ತ್ವಶಾಸ್ತ್ರ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೋರಿದ ಆಸಕ್ತಿಯನ್ನೇ ರಾಜಕೀಯದಲ್ಲೂ ತೋರಿಸಿದ. 1910ರಲ್ಲಿ ಸೆನೆಟ್ ಸದಸ್ಯನಾದ. 1920-21ರವರೆಗೆ ವಿದ್ಯಾಮಂತ್ರಿಯಾಗಿದ್ದ. 1925ರಲ್ಲಿ ಫ್ಯಾಸಿಸ್ಟರ ವಿರುದ್ಧವಾಗಿ ಒಂದು ಘೋಷಣೆಯನ್ನು ಮಂಡಿಸಿದ. ಇದರಿಂದ ಕೆರಳಿದ ಫ್ಯಾಸಿಸ್ಟರು 1926ರಲ್ಲಿ ಇವನ ಮನೆಯ ಮೇಲೆ ದಾಳಿ ನಡೆಸಿದರು. ಈತನ ಖ್ಯಾತಿ ಎಷ್ಟಿತ್ತೆಂದರೆ ಸ್ವತಃ ಮುಸಲೋನಿಯೇ ಈತನ ಬಗ್ಗೆ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಹೆದರಿದ. 1943ರಲ್ಲಿ ಲಿಬರಲ್ ಪಾರ್ಟಿಯನ್ನು ಪುನರುಜ್ಜೀವನಗೊಳಿಸಿ ಅದರ ಅಧ್ಯಕ್ಷನಾದ. 1944ರಲ್ಲಿ ಖಾತೆ ಇಲ್ಲದ ಮಂತ್ರಿಯಾಗಿ ಸೇವೆ ಸಲ್ಲಿಸಿದ. 1945ರಲ್ಲಿ ಕನ್‍ಸಲ್ಟೆಟಿವ್ ಕೌನ್ಸಿಲ್, 1946ರಲ್ಲಿ ಕಾನ್ಸ್ಸ್ಟಿಟ್ಯೂಟಿವ್ ಅಸೆಂಬ್ಲಿಗಳ ಸದಸ್ಯನಾಗಿದ್ದ. 1947ರಲ್ಲಿ ತನ್ನ ಮನೆಯ ಒಂದು ಭಾಗದಲ್ಲಿ ಇಟಲಿಯ ಚರಿತ್ರೆಯ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಿದ. ದೀರ್ಘಕಾಲದ ಕಾಯಿಲೆಯಿಂದಾಗಿ 1952ನೆಯ ನವೆಂಬರ್ 20ರಂದು ನೇಪಲ್ಸ್‍ನಲ್ಲಿ ಸ್ವರ್ಗಸ್ಥನಾದ.  								(ಜಿ.ಎಚ್.)

ಕ್ರೋಚೆಯ ವಿಮರ್ಶೆ

ಲಲಿತಕಲೆಯ ವಿಚಾರವಾಗಿ ಭೌತಾತೀತ ಚಿಂತನೆಗೆ ಕ್ರೋಚೆಯನ್ನು ಪ್ರಚೋದಿಸಲು ಕಾರಣವಾದದ್ದು ಸಾಹಿತ್ಯ ವಿಮರ್ಶೆಯಲ್ಲಿ ಎದ್ದು ಬಂದು ಬಹುಮಟ್ಟಿಗೆ ಅಂಗೀಕೃತವಾಗಿದ್ದ ಶಿಷ್ಟತಾ ಸೂತ್ರಾವಳಿ(ಕ್ಲಾಸಿಕಲ್ ರೂಲ್ಸ್) ಮತ್ತು ಕಾವ್ಯ ಪ್ರಭೇದಗಳು. ಸೂತ್ರಗಳಿಗಾಗಲಿ ಪ್ರಭೇದಗಳಿಗಾಗಲಿ ತತ್ವಶಃ ಅಸ್ತಿತ್ವವಿಲ್ಲ, ಅರ್ಥವಿಲ್ಲ ಎಂದು ಈತ ಮನಗಂಡ. ಏತಕ್ಕೆಂದರೆ ನಿಸರ್ಗ ತಾನಾಗಿಯೇ ವಾಸ್ತವವಾದ ದ್ರವ್ಯವಲ್ಲ. ಅಂತಃಶ್ಚೈತನ್ಯ ಉತ್ಪತ್ತಿಮಾಡಿದ ದ್ರವ್ಯ. ಕ್ರೋಚೆಯ ತತ್ತ್ವಶಾಸ್ತ್ರದಲ್ಲಿ ಚೈತನ್ಯವೇ ಎಲ್ಲಕ್ಕೂ ಮೂಲ; ಎಲ್ಲವೂ ಅದರಿಂದ ಜನ್ಯ. ಚೈತನ್ಯದ ಚಟುವಟಿಕೆಗಳಲ್ಲಿ ನಾಲ್ಕು ಮುಖ್ಯ: ಅಂತರ್ಬೋಧೆ-ಅಭಿವ್ಯಕ್ತಿ; ಬೌದ್ಧಿಕ ಕಲ್ಪನೆ; ಸಂಕಲ್ಪ ಶಕ್ತಿ; ವಿಶಿಷ್ಟ ಸಂಕಲ್ಪ. ಇವುಗಳಲ್ಲಿ ಮೊದಲನೆಯದನ್ನೇ ಕಲೆಯ ಸ್ವರೂಪ ಮತ್ತು ಸಾಧನೆಯನ್ನು ವಿಚಾರಿಸುವವ ಪರ್ಯಾಲೋಚಿಸಬೇಕಾದದ್ದು.

ಕ್ರೋಚೆಯ ದೃಢನಿಶ್ಚಯದಂತೆ ಅಂತರ್ಬೋಧೆ ಅಭಿವ್ಯಕ್ತ ಎರಡೂ ಒಂದೇ. ಒಂದನ್ನು ಬಿಟ್ಟು ಇನ್ನೊಂದು ಆಗುವಂತಿಲ್ಲ, ಇರುವಂತಿಲ್ಲ. ಕಲೆಯಲ್ಲಿ ಅಂತರ್ಬೋಧೆ ಅಭಿವ್ಯಕ್ತಿಗಳನ್ನು ಸಮಾನಾರ್ಥಕ ಶಬ್ದಗಳೆಂದು ಭಾವಿಸಿಕೊಂಡತೆ ತಪ್ಪಾಗದು. ಹಾಗಾದರೆ, ನೋಟಕರಿಗೊ ಶ್ರೋತೃಗಳಿಗೊ ವಾಚಕರಿಗೊ ಸಂವೇದ್ಯವಾಗುವ ಚಿತ್ರ ಸಂಗೀತ ಕಾವ್ಯ ಮುಂತಾದುವನ್ನು ಏನೆಂದು ಬರೆಯಬೇಕು? ಕ್ರೋಚೆಯ ದೃಷ್ಟಿಗೆ ಅವೆಲ್ಲ ಕಲೆಗಾರ ಇಚ್ಛೆಪಟ್ಟು ತನ್ನ ಅಂತರ್ಯದಲ್ಲಾದ ಕಲೆಗೆ ಹೊಂದಿಸಿದ ಬಾಹ್ಯರೂಪ, ಮೂರ್ತರೂಪ. ಅವು ಆ ಕಲೆಯ ಸಮರ್ಪಕ ಪ್ರತಿಬಿಂಬವೊ ಅಲ್ಲವೊ ಹೇಳಲಾಗದು. ಒಳಗಿದ್ದದ್ದೇನೊ ಹೊರತಂದದ್ದೇನೊ ಯಾರಿಗೆ ಗೊತ್ತು? ಶ್ರೇಷ್ಠ ಕಲಾವಿದನಿಗೂ ಸಾಧಾರಣ ಕಲಾವಿದನಿಗೂ ಇರುವ ವ್ಯತ್ಯಾಸ ಶುದ್ಧ ಅಥವಾ ಪರಿಪೂರ್ಣ ಕಲಾಕೃತಿಯ ನಿರ್ಮಾಣದಲ್ಲಿ ಕಂಡುಬರುತ್ತದೆ. ಅವನಿಗೆ ಮಾತ್ರ ಅದು ಸಾಧ್ಯ.

ಕಲೆಯ ಅಥವಾ ಸಾಹಿತ್ಯದ ಜಿಜ್ಞಾಸೆಯಲ್ಲಿ ಬಲು ಬಳಕೆಯಾಗುವ ಇನ್ನೆರಡು ಪದಗಳು-ವಿಭಾವನೆ (ಇಮ್ಯಾಜಿನೇಷನ್) ಮತ್ತು ಅಂದಚಂದ (ಬ್ಯೂಟಿ). ಕ್ರೋಚೆಯ ತಿಳಿವಳಿಕೆಗೆ ಅವೂ ಪ್ರತ್ಯೇಕ ಅಭಿಪ್ರಾಯವನ್ನು ಸೂಚಿಸುವ ಭಿನ್ನ ನುಡಿಗಳಲ್ಲ. ಹೆಚ್ಚು ಕಡಿಮೆ ಅವು ಸಮಾನಾರ್ಥಕ; ಅಷ್ಟೇ ಅಲ್ಲ, ದಿಟವಾಗಿ ತರ್ಕಬದ್ಧವಾಗಿ ಆಲೋಚನೆ ಮಾಡಿದರೆ, ಅಂತರ್ಬೋಧೆ ಅಭಿವ್ಯಕ್ತಿ ಎಂದು ಯಾವುದನ್ನು ಕರೆಯುತ್ತೇವೆಯೊ ಅದನ್ನೇ ವಿಭಾವನೆಯೆಂದು ಕರೆದರೂ ಸಲ್ಲುತ್ತದೆ. ವಿಭಾವನೆ ಬೇರೊಂದು ಪದ ಅಷ್ಟೆ; ಅದರ ಸ್ವರೂಪವೂ ಸಾಧನೆಯೂ ಅಂತರ್ಬೋಧೆಯ ಅಥವಾ ಅಭಿವ್ಯಕ್ತಿಯ ಸ್ವರೂಪ ಸಾಧನೆಗಳಿಂದ ಬೇರೆಯಾಗಿರಲಾರದು. ಹಾಗೆಯೇ ಕಲಾವಿದ ಎಲ್ಲೊ ತನ್ನ ಹೊರಗಿರುವ ಅಂದಚಂದವನ್ನು ಅನುಕರಿಸಿ ಕಲಾಕೃತಿಯನ್ನು ರಚಿಸುವುದಿಲ್ಲ; ಅವನ ಒಳಗಿರುವ ಅಂತರ್ಬೋಧೆ ಅಭಿವ್ಯಕ್ತಗೊಳ್ಳುವುದೇ ಅಂದಚಂದವಾಗಿ ಕಾಣಬರುತ್ತದೆ. ಆದ್ದರಿಂದ ಸೌಂದರ್ಯವೆಂಬುದೇ ಒಂದೇ ಕಲಾತತ್ತ್ವಕ್ಕೆ ಇರಬಹುದಾದ ಇನ್ನೊಂದು ಹೆಸರು. ಕಲಾಕೃತಿಯಲ್ಲಿ ಅಂದಚಂದ ಕಡಿಮೆ ಅಥವಾ ಇಲ್ಲ ಎನ್ನುವುದರ ಬದಲು ಅದು ಅಪೂರ್ಣ, ಅಸಮಗ್ರ, ಅಶುದ್ಧ, ಕುರೂಪ ಎನ್ನುವ ಅಭ್ಯಾಸ ವಾಡಿಕೆಗೆ ಬಂದಿದೆ; ತತ್ತ್ವಶಾಸ್ತ್ರದಂತೆ ಅಂಥ ಮಾತು ಸಮಂಜಸವಲ್ಲ. ಇಂಥ ಸಂದರ್ಭಗಳಲ್ಲಿ ಗೋಚರಿಸುವ ವ್ಯತ್ಯಾಸ ಗುಣಕ್ಕೆ ಸಂಬಂಧಪಟ್ಟದ್ದಲ್ಲ. ಪರಿಮಾಣಕ್ಕೆ ಸಂಬಂಧಪಟ್ಟದ್ದು, ಶಾಸ್ತ್ರ ಗುಣವನ್ನು ಪರಿಗಣಿಸಬೇಕೇ ವಿನಾ ಪರಿಮಾಣವಲ್ಲ. ಪ್ರೇಮಗೀತದ ಕವಿಯ ಒಂದು ಪದ್ಯಕ್ಕೂ ಸಾಮಾನ್ಯ ಮನುಷ್ಯನ ಪ್ರೇಮದ ಸೊಲ್ಲಿಗೂ ಭಾವತೀವ್ರತೆಯಲ್ಲಿ ಯಾವ ಅಂತರವೂ ಇಲ್ಲದಿರುವುದು ಸಂಭವನೀಯವಷ್ಟೇ ಅಲ್ಲ, ಸತ್ಯವೂ ಹೌದು. ಅಂತರ ಇರುವುದು ವಿಸ್ತೀರ್ಣದಲ್ಲಿ, ಅಂಗವೈವಿಧ್ಯದಲ್ಲಿ, ಬಾಹ್ಯಾಕಾರದಲ್ಲಿ; ಅದು ಸಂಕೀರ್ಣ, ಇದು ಸರಳ.

ಕಲಾವಿಮರ್ಶೆಯಲ್ಲಿ ಭಾವ(ಫೀಲಿಂಗ್) ಅಥವಾ ರಾಗಕ್ಕೆ (ಎಮೋಷನ್) ದೊಡ್ಡ ಜಾಗ ಇರುವುದನ್ನು ಸಕಲರೂ ಬಲ್ಲರು. ಕಲಾವಿದರು ಭಾವಜೀವಿಗಳು ಎಂಬುದು ಸಾಮಾನ್ಯ ಗಾದೆಯಂತೆ ಪ್ರಸಿದ್ಧವಾಗಿದೆ. ಕ್ರೋಚೆ ಭಾವಕ್ಕೆ ಲಕ್ಷ್ಯವನ್ನು ಕಟ್ಟರೂ ಅದನ್ನು ಮಾರ್ಪಡಿಸಿಯೇ ತನ್ನ ಕಲಾತತ್ತ್ವದೊಳಕ್ಕೆ ಬರಗೊಟ್ಟಿದ್ದಾನೆ. ಬರಿ ಭಾವಕ್ಕೂ ಕಲೆಗೂ ಎಂದೂ ನಿಕಟ ಬಾಂಧವ್ಯ ಏರ್ಪಡಲಾರದು ಎಂದು ಅವನ ನಂಬಿಕೆ. ಭಾವವೆಂಬುದು ಜನರ ನಿತ್ಯಜೀವನದ ಪರಿಚಿತ ಭಾಗ. ಆದು ವಾಸ್ತವ. ಅದರಿಂದ ಅಷ್ಟಿಷ್ಟು ಪರಿಣಾಮ. ಆದರೆ ಕಲೆಯೊಳಕ್ಕೆ ಸೇರಿಕೊಳ್ಳಬಲ್ಲದ್ದು ಅಂತರ್ಬೋಧಿತವಾಗಿ ರೂಪುಗೊಂಡು ಅಭಿವ್ಯಕ್ತವಾದ, ಕೇವಲ ಭಾವೋದ್ರೇಕವಲ್ಲದ, ಭಾವ ಒಂದು ಕಲಾಕೃತಿಯ ಅನುಭವ ನಮಗೆ ಸಂತೋಷ ತಂದುಕೊಡುತ್ತದೆ ಎಂದು ನಾವು ಹೇಳುವಾಗ ಆ ಕೃತಿಗೂ ನಮ್ಮ ಸಂತೋಷಕ್ಕೂ ಕಾರ್ಯ-ಕಾರಣ ಸಂಬಂಧವಿದೆಯೆಂದು ಭ್ರಾಂತಿಪಡಕೂಡದು. ಅಂತಃಶ್ಚೈತನ್ಯದ ನಾಲ್ಕು ಚಟುವಟಿಕೆಗಳಲ್ಲಿ ಪ್ರತಿಯೊಂದೂ ಇಲ್ಲ ವಿಜಯದಲ್ಲೊ ಇಲ್ಲ ಸೋಲಲ್ಲೊ ಕೊನೆಗೊಂಡಾಗ ಜೊತೆಯಲ್ಲೇ ಇನ್ನೊಂದು ವಿಶೇಷ ಚಟುವಟಿಕೆ ಉಲ್ಬಣವಾಗುತ್ತದೆ; ನಲಿವಾಗಲಿ, ನೋವಾಗಲಿ ಕಲಾವಿದನ ವೈಯಕ್ತಿಕ ಬದುಕಿಗೆ ಅಷ್ಟೊ ಇಷ್ಟೊ ಅಂಟಿಕೊಂಡಿರಬಹುದು. ಅವನ ಕಲಾಸೃಷ್ಟಿಯಿಂದ ಅವು ದೂರ. ಕಲೆಗೂ ವ್ಯಾವಹಾರಿಕ ಜೀವನಕ್ಕೂ ಸಂಬಂಧ ಕಲ್ಪಿಸಹೋಗುವುದು ತರವಲ್ಲ; ಮಿಥ್ಯೆ ಹೇಗೆ ಸತ್ಯವಾದೀತು?

ಎಂದಮೇಲೆ, ಕ್ರೋಚೆಯ ಸಾಹಿತ್ಯ ವಿಮರ್ಶೆ ನಕಾರಾತ್ಮಕ ಹೇಳಿಕೆಗಳಿಂದ ನಿಬಿಡವಾಗಿದೆ. ಅವನು ಒಪ್ಪುವಂತಾದ್ದು ಕೃತಿಸೀಮಿತ ವಿಮರ್ಶೆ, ಕಲಾತಿಷ್ಠ ವಿಮರ್ಶೆ. ಸಾಹಿತಿ; ಅವನ ಜೀವನ ಗುಣಶೀಲ ಬಡತನ ಸಿರಿತನ; ಅವನ ಸಮಯ ಸನ್ನಿವೇಶ; ಧಾರ್ಮಿಕ ಸಾಮಾಜಿಕ ರಾಜಕೀಯ ಆಗುಹೋಗುಗಳು; ವಿಜ್ಞಾನ ನಾಗರೀಕತೆಗಳು ಅವುಗಳ ಬೆಳವಣಿಗೆ-ಮುಂತಾದ ಸಂಗತಿಗಳ ಪರಿಚಯದಿಂದ ಕಾವ್ಯ, ನಾಟಕ ಯಾವುದು ಪರಿಚಯವಾಗಲಾರದು, ಸರಿಯಾಗಿ. ಕೇವಲ ಅವೇ ತಮ್ಮ ಪರಿಚಯವನ್ನು ಮಾಡಿಕೊಡಬೇಕು. ಭವ್ಯಕಾವ್ಯ (ಎಪಿಕ್), ನಾಟಕ ಭಾವಗೀತೆ ಎಂಬ ವಿಂಗಡಣೆ ಕ್ರೋಚೆಯ ಮತದಂತೆ, ಅಪ್ರಯೋಜಕ ಮಾತ್ರವಲ್ಲ, ತಪ್ಪುತಿಳುವಳಿಕೆ. ಯಾವ ಕಾವ್ಯವೇ ಆಗಲಿ ಅದರಲ್ಲಿ ಕವಿಯ ಆಂತರ್ಯ ರೂಪುಗೊಂಡಿರುವುದರಿಂದ ಅದು ನಿಜವಾಗಿ ಭಾವಗೀತೆ. ಎಲ್ಲಾ ಕಾವ್ಯವೂ ಸಹಜವಾಗಿ ಭಾವಗೀತೆ. ವಿಮರ್ಶಕನ ಕರ್ತವ್ಯ ಒಂದೆ: ತನ್ನ ಮುಂದಿರುವ ಕಾವ್ಯಕ್ಕೆ ಕಾವ್ಯತನವನ್ನು ಒದಗಿಸಿರುವ ಅಂಶ ಯಾವುದು, ಅದರ ಬಗೆಯೇನು ಎಂಬ ಪ್ರಶ್ನೆಗೆ ಸದುತ್ತರವನ್ನು ಖಚಿತವಾಗಿ ವಿವರಿಸುವುದು. ಮಿಕ್ಕ ಯಾವ ಪ್ರಶ್ನೆಗೂ ಅವನ ಪ್ರಜ್ಞೆಗೆ ತೋಚಬೇಕಾದಿಲ್ಲ. ತೋಚಿದರೆ ಅನರ್ಥ ಖಂಡಿತ. ವಿಮರ್ಶಾಪ್ರಪಂಚಲ್ಲಿ ಚಲಾವಣೆಯ ನಾಣ್ಯಗಳಾಗಿರುವ ನಿಯಮಾವಳಿ ಅಲಂಕಾರಗಳು ಛಂದೋರೀತಿ, ಪದ್ಯಗದ್ಯಭೇದ, ಪದಪುಂಜ, ಕಥಾವಸ್ತು, ಕಥಾನಿಯಂತ್ರಣ, ಪಾತ್ರಶಿಲ್ಪ, ಶೈಲಿ, ವಿಶ್ಲೇಷಣ, ವರ್ಗೀಕರಣ ಶಿಷ್ಟತೆ, ನವಶಿಷ್ಟತೆ, ರಮ್ಯತೆ, ಸಾಂಕೇತಿಕತೆ, ಆಧುನೀಕತೆ, ಅತ್ಯಾಧುನೀಕತೆ-ಮುಂತಾದುವೆಲ್ಲವನ್ನೂ ಕೆಚ್ಚೆದೆಯಿಂದ ಕಿತ್ತೊಗೆದಿದ್ದಾನೆ, ಕ್ರೋಚೆ. ಯಾವೊಬ್ಬ ವಿಮರ್ಶಕನ ನಿಯಮಾವಳಿಯೂ ಸಾಹಿತ್ಯಲೋಕದಲ್ಲಿ ಅನುಲಂಘನೀಯ ಕಾಯಿದೆಯಾಗಿಲ್ಲ; ಮುಂದೆ ಬಂದ ಕವಿಗಳು ಅದನ್ನು ಒಡೆದಿದ್ದಾರೆ. ವಿಮರ್ಶಕರು ಅದನ್ನು ಅಲ್ಲಗಳೆದಿದ್ದಾರೆ-ಎಂಬ ಅರ್ಧ ಸತ್ಯಾಂಶ ಕ್ರೋಚೆಯ ಪ್ರಧಾನ ಆಯುಧ. 

ಅಂತರ್ಬೋಧೆ, ಅಭಿವ್ಯಕ್ತಿ ಶಬ್ದಗಳ ಜೊತೆಗೆ ಅಲ್ಲೊಮ್ಮೆ ಇಲ್ಲೊಮ್ಮೆ ಕವಿಯ ನಿಜ ರಾಗಭಾವನೆ ಎಂಬ ಪದಪುಂಜವನ್ನು ಕ್ರೋಚೆ ಉಪಯೋಗಿಸಿದ್ದಾನೆ. ತಾತ್ಪರ್ಯ ಒಂದೆ. ಬಳಕೆಯ ನುಡಿಗಳಿಗೆ ತನ್ನದೇ ಆದ ವಿಶೇಷಾರ್ಥವನ್ನು ಕೊಡಿಸುವುದರಲ್ಲಿ ಕ್ರೋಚೆ ನಿಸ್ಸೀಮ. ಕವಿಯ ನಿಜ ರಾಗಭಾವನೆಯೇ ಅವನ ಕಾವ್ಯತ್ವ, ಅವನ ಕಾವ್ಯ. ಅದು ಎಲ್ಲಿ ಮೂಡಿಬಂದಿದೆಯೋ ಅಲ್ಲಿ ವಿಮರ್ಶಕ ತನ್ನ ಬೆರಳನ್ನಿಟ್ಟು ಇತರರಿಗೆ ತೋರಿಸಿಕೊಡಬೇಕು; ಹಾಗೆ ಮಾಡಿದರೆ ಅವನು ಧನ್ಯ. ಕಾವ್ಯವನ್ನು ಪಠಿಸುವಾಗ, ಕಾವ್ಯಕ್ಕೆ ವ್ಯಾಖ್ಯಾನ ಮಾಡುವಾಗ, ವಿಮರ್ಶಕ ಕಾವ್ಯತ್ವ ಎದ್ದುನಿಂದಿರುವ ಭಾಗಗಳನ್ನು ಮಾತ್ರ ಗಮನಿಸಿ ಉಳಿದ ಭಾಗಗಳನ್ನು ಅಲಕ್ಷಿಸತಕ್ಕದ್ದು. ಈ ವಿಧದ ರಸಘಟ್ಟ ಗ್ರಹಿಕೆಯಿಂದ ಕವಿಗೆ ಅನ್ಯಾಯವೇನೂ ಆಗುವುದಿಲ್ಲ. ಬದಲಾಗಿ, ಕವಿಯ ಕವಿವ್ಯಕ್ತಿತ್ವ(ಪೊಯೆಟಿಕ್ ಪರ್ಸನ್ಯಾಲಿಟಿ) ಚೆನ್ನಾಗಿ ಚಿತ್ರಿತವಾಗುತ್ತದೆ. ಷೇಕ್ಸ್‍ಪಿಯರಾಗಲಿ, ಕಾರ್ನಿಲನಾಗಲಿ ಅವನ ಕಳಪೆಯೂ ಕುರೂಪವೂ ಆದ ಭಾಗಗಳನ್ನು ಕಟ್ಟಿಕೊಂಡು ನಾವೇಕೆ ದುಗುಡಗೊಳ್ಳಬೇಕು? ಅವಾವುವೂ ಅವನ ಕವಿವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯಲಾರದು. ಕ್ರೋಚೆ ಉಪದೇಶಿಸುವುದು ಒಂದು ಬಗೆಯ ಕವಿತಾಸಂಗ್ರಹ ವಿಮರ್ಶೆ, ಜೋಪಾನವಾಗಿ ಆರಿಸಿ ತೆಗೆದ ಕವಿತಾ ಸಂಗ್ರಹ ವಿಮರ್ಶೆ. ಪ್ರಾಯೋಗಿಕ ವಿಮರ್ಶಕನಾಗಿ ಕ್ರೋಚೆ ಅಂಥ ನಿದರ್ಶನವನ್ನು ಸಾಕಷ್ಟು ಕೊಟ್ಟಿದ್ದಾನೆ. ಒಳ್ಳೆಯ ರಸಜ್ಞ ಆತ; ಅವನ ವಾಕ್ಯಗಳಿಗೆ ಮನ್ನಣೆ ಸಲ್ಲಲೇಬೇಕು.

ಹಿಂದಿನಿಂದ ಮುಖ್ಯವಾಗಿ 18-19ನೆಯ ಶತಮಾನಗಳಲ್ಲಿ ಕೆಲವು ಕಟ್ಟುಪಾಡು ಹುಟ್ಟಿಬಂದು ಸಾಹಿತ್ಯ ವಿಮರ್ಶೆಯನ್ನು ಸಂಕಲೆಗೊಳಿಸಿದ್ದುವು. ಕ್ರೋಚೆ ಸ್ವಲ್ಪಮಟ್ಟಿಗೆ ಅವುಗಳಿಂದ ವಿಮೋಚನೆಗೆ ಕಾರಣನಾದ. ಕೃತಿಗೂ ವಿಮರ್ಶಕನಿಗೂ ಮಧ್ಯೆ ಯಾವ ಸಿದ್ಧಾಂತವಾಗಲಿ, ಪೂರ್ವಭಾವನೆಯಾಗಲಿ ಹೊರಗಣ ಸಂಗತಿಯಾಗಲಿ ವಿಚಾರವಾಗಿ ನಿಲ್ಲಕೂಡದು, ತಡೆಯಾಗಬಾರದು, ಎಂಬ ಅಭಿಪ್ರಾಯ ಮೆಚ್ಚಲರ್ಹವಾದದ್ದು. ಕೊನೆಗೆ ವೈಯಕ್ತಿಕವಾಗಿ ಕೃತಿಕಾರನೂ ಅಡ್ಡ ಬರಬಾರದು ಎಂಬುದೇ ಅವನ ವಿಸ್ಮಯತರುವ ಅಭಿಮತ. ಅದು ಸರಿ ಆದರೆ ವಿಮರ್ಶೆಯಲ್ಲಿ ಅವನು ಉಳಿಯಗೊಡುವುದೇನು? ಅದರ ಬೆಲೆಯೆಷ್ಟು? ವಿಮರ್ಶಕನ ವೈಯಕ್ತಿಕ ಅನಿಸಿಕೆಯೇ ಪ್ರಮಾಣವಾಗಿಬಿಟ್ಟರೆ, ಬೇರಾವ ಪ್ರಮಾಣಕ್ಕೂ ಸ್ಥಾನಸಿಕ್ಕದೇ ಹೋದರೆ, ಅಭಿಪ್ರಾಯ ವಿನಿಮಯವಾಗಲಿ, ಪರಸ್ಪರ ಹೊಂದಾಣಿಕೆಯಾಗಲಿ ಹೇಗೆ ಸಾಧ್ಯ. ಅಭಿವ್ಯಕ್ತಿ ಪಂಥದ ಅದಿಪತ್ಯದಿಂದ ಗೊಂದಲಯೇಳುವುದಿಲ್ಲವೆ? ಎರಡನೆಯದಾಗಿ, ಸಾವಿರಾರು ವರ್ಷಗಳಿಂದ ನಡೆದುಬಂದ ವಿಮರ್ಶೆಯಲ್ಲಿ ಆ ವ್ಯವಸಾಯಕ್ಕೆ ಸದಾ ಮಾರ್ಗದರ್ಶಿಯಾಗಿ ನಿಲ್ಲಬಲ್ಲ, ಅನುಸರಿಸಬೇಕಾದ, ಶಾಶ್ವತ ತತ್ವ ಪದ್ಧತಿ, ನುಡಿಗಟ್ಟು, ಒಂದೂ ಇಲ್ಲವೆಂದು ಕ್ರೋಚೆ ಹೇಳಿಬಿಟ್ಟರೆ ಅದನ್ನು ನಂಬಬೇಕೆ? ಕೆಲವು ವಿಮರ್ಶಕರು ತಮ್ಮ ತಮ್ಮ ವ್ಯಾಮೋಹವನ್ನು ಹಿಂಬಾಲಿಸಿ ಅತಿಯಿಂದ ಅತಿರೇಖಕ್ಕೆ ಧುಮ್ಮಿಕ್ಕಿರುವುದು ದಿಟ; ಕ್ರೋಚೆಯೂ ಅವರ ಗುಂಪಿಗೆ ಸೇರಿದವನೆಂದು ಭಾಸವಾಗದೆ ಹೋಗುತ್ತದೆಯೆ? ಮೂರನೆಯದಾಗಿ ಕಲೆ, ಅಂತರ್ಬೋಧೆ, ಅಭಿವ್ಯಕ್ತಿ, ವಿಭಾವನೆ ಸೌಂದರ್ಯವೆಲ್ಲಕ್ಕೂ ರೂಢಿಗೆ ವ್ಯತಿರಿಕ್ತವಾಗಿ ಒಂದೇ ಅರ್ಥವನ್ನು ಆರೋಪಿಸುವುದು ಸಮವೇ, ನ್ಯಾಯವೇ? ನಾಲ್ಕನೆಯದಾಗಿ, ವಿಮರ್ಶೆಯೂ ಒಂದು ವಿದ್ಯೆ, ಪಾರಿಭಾಷಿಕತೆ ಅದಕ್ಕೂ ಉಂಟು, ಎಂಬುದನ್ನು ಮರೆಯಬಹುದೆ? ಈ ಎಲ್ಲಾ ದೃಷ್ಟಿಯಿಂದ ಕ್ರೋಚೆಯ ವಿಮರ್ಶನ ಪದ್ಧತಿಯನ್ನೂ ಸಂಪೂರ್ಣವಾಗಿ ಒಪ್ಪಲಾಗುವುದಿಲ್ಲ. 								(ಎಸ್.ಎ.ಆರ್)

ಕ್ರೋಚೆಯ ಸೌಂದರ್ಯ ಮೀಮಾಂಸೆ

ತನ್ನ ಮಹಾಗ್ರಂಥವಾದ ಈಸ್ಥೇಟಿಕದಲ್ಲಿ ಸೌಂದರ್ಯ, ಕಲಾನುಭವ ಮತ್ತು ಕಲಾಕೃತಿಗಳ ವಿಷಯದಲ್ಲಿ ತನ್ನದೇ ಆದ ವಿಶಿಷ್ಟ ಮತವನ್ನು ಕ್ರೋಚೆ ಸ್ಥಾಪಿಸಿದ್ದಾನೆ. ಈತನ ಪ್ರಕಾರ ಕಲಾಕ್ರಿಯೆ ಮಾನವನ ಆಧ್ಯಾತ್ಮಿಕ ಚರಿತ್ರೆಯಲ್ಲಿ ಒಂದು ರಸನಿಮಿಷ. ಸೌಂದರ್ಯಾನುಭವ ಒಂದು ಆಧ್ಯಾತ್ಮಿಕ ಅನುಭೂತಿ. ಇದರೊಡನೆ ನೀತಿ, ಧರ್ಮ, ಪ್ರಯೋಜನ ಮುಂತಾದ ವಿಷಯಗಳ ಯಾವ ಸಂಬಂಧವೂ ಇಲ್ಲ. ಆಧ್ಯಾತ್ಮಿಕ ಶಕ್ತಿಯಾದ ಪ್ರತಿಭಾನದ ದೃಷ್ಟಿಗೆ ಸಮಸ್ತ ಪ್ರಪಂಚವೂ ಗೋಚರವಾಗುತ್ತದೆ. ಅಲ್ಲದೆ, ಪ್ರತಿಭಾನಕ್ಕೆ ಕಂಡ ದೃಶ್ಯ ಸಂಪೂರ್ಣವಾಗಿ ಆತ್ಮವೇದ್ಯವಾಗುತ್ತದೆ. ಅಸಂಪೂರ್ಣವಾದ ನೋಟ ಪ್ರತಿಭಾನದ ನೋಟವಾಗಲಾರದು. ಎಂದರೆ ಒಂದು ವಿಷಯ ಅಥವಾ ವಸ್ತುಸಂಪೂರ್ಣವಾಗಿ ವ್ಯಕ್ತವಾಗದಿದ್ದಲ್ಲಿ ಪ್ರತಿಭಾನದ ಮಟ್ಟಕ್ಕೆ ಏರಿಲ್ಲವೆಂದೇ ತಿಳಿಯಬೇಕು. ಆದ್ದರಿಂದ ಒಂದು ವಸ್ತುವಿನ ವ್ಯಕ್ತವಾಗುವಿಕೆಯೇ ಪ್ರತಿಭಾನವೆನ್ನಿಸಿಕೊಳ್ಳುತ್ತದೆ. ಅಥವಾ ಪ್ರತಿಭಾನವೇ ವ್ಯಕ್ತಮಾಡುವಿಕೆಯೂ ಆಗಿರುತ್ತದೆ. ಇದೇ ಕ್ರೋಚೆಯ ಸೌಂದರ್ಯ ಮೀಮಾಂಸೆಯ ಸೂತ್ರ. ಈ ವಾದ ಮನದಟ್ಟಾಗುವುದು ಸ್ವಲ್ಪ ಕಷ್ಟ. 

ಸಾಮಾನ್ಯಾಭಿಪ್ರಾಯದಲ್ಲಿ ವ್ಯಕ್ತಮಾಡುವುದೆನ್ನುವುದು ಬಹಿರಂಗಪಡಿಸುವ ಒಂದು ಕಾರ್ಯ. ಅಂದರೆ ಭಾವನೆಗಳನ್ನು ಪದ, ಬಣ್ಣ, ಶಬ್ದ, ಮತ್ತಿತರ ಸಾಧನಗಳ ಮೂಲಕ ಬಹುರಂಗ ಪಡಿಸುವಿಕೆ-ಅಂದರೆ ಪ್ರತಿಭಾನದ ಅನಂತರ ನಡೆಸುವ ಕಾರ್ಯ ಎಂದಾಗುತ್ತದೆ. ಆದರೆ ಇದಕ್ಕೆ ವಿರುದ್ದವಾದುದೇ ಕ್ರೋಚೆಯ ವಾದ. ಕ್ರೋಚೆಯ ಪ್ರಕಾರ ಮನೋವೇದ್ಯವಾದ ಅಥವಾ ಪ್ರತಿಭಾನಾಗ್ರಾಹ್ಯವಾದ ಕಲಾನುಭವ ಸ್ವತಃ ಸಂಪೂರ್ಣ. ಸೌಂದರ್ಯಾನುಭವವನ್ನು ಯಾವ ಮಾಧ್ಯಮದ ಮೂಲಕವೂ ಹೊರಗೆಡಹುವ ಅವಶ್ಯಕತೆ ಇಲ್ಲವೇ ಇಲ್ಲ. ಆತ್ಮಾನುಭವದಲ್ಲಿಯೇ ಸೌಂದರ್ಯಾನುಭವ ಮತ್ತು ಕಲಾಕೃತಿಗಳು ಸಂಪೂರ್ಣಗೊಳ್ಳುತ್ತವೆ. ಎಂದರೆ ಸೌಂದರ್ಯ ಮತ್ತು ಕಲಾನುಭವಗಳು ಮನೋನಿಷ್ಠವೆಂದಂತಾಯಿತು. 
ಇಂಥ ಆಧ್ಯಾತ್ಮಿಕ ಅಥವಾ ಮನೋನಿಷ್ಠ ಅನುಭವ ಸ್ವಯಂ ಪರಿಪೂರ್ಣವಾಗಿದ್ದು ಬಾಹ್ಯಭಿವ್ಯಕ್ತಿಗೆ ಸಂಬಂಧಪಟ್ಟಿರುವುದಿಲ್ಲ. ಎಂದರೆ ನಾವು ಸಾಮಾನ್ಯವಾಗಿ ಕರೆಯುವ ಕಲಾಕೃತಿಗಳಿಗೂ-ಎಂದರೆ ಚಿತ್ರ, ಕವನ ಶಿಲ್ಪ ಮುಂತಾದವು-ಆ ಆದರ್ಶ, ಆಧ್ಯಾತ್ಮಿಕ ಅನುಭವಕ್ಕೂ ಯಾವ ಸಂಬಂಧವೂ ಇರುವುದಿಲ್ಲ. ಭೌತಮಾಧ್ಯಮ ಮೂಲಕವಾದ ಅಭಿವ್ಯಕ್ತಿ ಕಲಾನುಭವಕ್ಕೆ ಹೊರತಾಗಿ ಕೇವಲ ಪ್ರಾಪಂಚಿಕವಾಗುತ್ತದೆ. ಆದ್ದರಿಂದ ಆಧ್ಯಾತ್ಮಿಕವಾದ ಕಲಾನುಭವ ಮತ್ತು ಕಲಾಕೃತಿಗಳು ಪ್ರಾಪಂಚಿಕ ಮೌಲ್ಯ ವಿಮರ್ಶೆಗಳಿಗೆ, ಮಾನದಂಡಗಳಿಗೆ ಸಂಬಂಧಿಸಿರುವುದಿಲ್ಲ. ಸುಂದರ, ಅಸುಂದರವೆನ್ನುವ ತೀರ್ಮಾನಗಳೆಲ್ಲ ಭೌತಿಕವಾಗಿ ನಮಗೆ ಕಾಣಸಿಗುವ ಅಥವಾ ಕೇಳಿಬರುವ ಕೃತಿಗೆ ಸೇರಿದ್ದಲ್ಲದೆ, ಆಂತರಿಕವಾದ ಕಲಾನುಭವ ಅಥವಾ ಕಲಾಕೃತಿಗೆ ಸಲ್ಲುವುದಿಲ್ಲ. ಕಲೆಗೆ ಬೇರೊಂದು ಆದರ್ಶವಿಲ್ಲ. ಅದೇ ಅದರ ಆದರ್ಶ. ಯಾವ ರಸನಿಮಿಷದಲ್ಲಿ ಒಬ್ಬ ಭಾವವೇಷ ಹೊಂದುತ್ತಾನೆಯೋ ಆಗಲೆ ಕಲೆ ಉತ್ಪನ್ನವಾಗುತ್ತದೆ. ವಸ್ತುವಿನ ಪೂರ್ವಪರಿಚಯದ ಅರಿವು ಬೇಕಾಗಿಲ್ಲ. ಅದನ್ನು ಕಲಾವಿದ ಅರಸುವುದೂ ಇಲ್ಲ. ಅದರ ವಿವೇಚನೆಯೇ ಆತನಿಗೆ ಇಲ್ಲ. ಒಂದು ಉದ್ದೇಶ ಸಾಧನೆಗೆ ಮಾಡುವ ಕಲಾಕೃತಿ ಕಲೆಯಲ್ಲ. ಕಲೆ ಉದ್ದೇರಹಿತವಾದುದು. ನೀತಿ, ಧರ್ಮಗಳ ಕಟ್ಟಳೆಗಳಿಂದ ಪಾರಾದುದು. ಕಲೆಗೆ ಒಂದು ವಿಶಿಷ್ಟರೀತಿಯಲ್ಲಿ ಪ್ರಾಪಂಚಿಕ ಮಾನದಂಡಗಳಿಗೆ ನಿಲುಕದಂತ ಸ್ವಾತಂತ್ರ್ಯವಿದೆ. ಕಲೆ, ಕಲೆಗಾಗಿ ಎನ್ನುವ ವಾದಕ್ಕೆ ಕ್ರೋಚೆಯ ವಿಚಾರ ಬಹಳ ಪುಷ್ಠಿಕೊಡುತ್ತದೆ.
ಬೊಸಾಂಕೆ, ಕಾಲಿಂಗ್‍ವುಡ್, ಕ್ಯಾರಿಟ್ ಮುಂತಾದವರು ಕ್ರೋಚೆಯ ಆದರ್ಶಪ್ರಧಾನವಾದ ಸೌಂದರ್ಯದರ್ಶನವನ್ನು ಮೆಚ್ಚಿಕೊಂಡರೂ ವಾಸ್ತವಿಕ ನೆಲೆಯಲ್ಲಿ ರೂಪುಗೊಳ್ಳದ ಪ್ರತಿಭಾನ ಕುಂಠಿತ ಅಥವಾ ಅಪೂರ್ಣವೆಂದು ಅಭಿಪ್ರಾಯಪಡುತ್ತಾರೆ. ಬೊಸಾಂಕೆ ತನ್ನ ತ್ರಿ ಲೆಕ್ಚರ್ಸ್ ಆನ್ ಈಸ್ಥೆಟಿಕ್ಸ್ ಎನ್ನುವ ಗ್ರಂಥದಲ್ಲಿ ಹೇಳುವಂತೆ, ಆತ್ಮದ ಪ್ರಕಾಶಕ್ಕೆ ದೇಹ ಬೇಕಾಗುವಂತೆ ಆಧ್ಯಾತ್ಮಶಕ್ತಿ ಎನಿಸಿದ ಪ್ರತಿಭೆಗೆ ಭೌತಿಕ ದೇಹ ಬೇಕಾಗುತ್ತದೆ. ವಸ್ತು ಗತಮಾಡದ ಪ್ರತಿಭಾನ ಪ್ರತಿಭಾನವಾಗಲಾರದು. ಎರಡನೆಯವನ ಕಣ್ಣಿಗೆ ಅಥವಾ ಕಿವಿಗೆ ಬೀಳದ ಶಿಲ್ಪ, ಚಿತ್ರ ಅಥವಾ ಸಂಗೀತ ಯಾವ ಮೌಲ್ಯ ನಿರ್ಧಾರಕ್ಕೂ ಸಹಾಯಕವಾಗಲಾರದು.			 											 (ಕೆ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ